ಕಾರ್ಬನ್ - 14 ಕಾಲನಿರ್ಣಯ

 ಪ್ರಾಕ್ತನ ಅವಶೇಷಗಳಲ್ಲಿನ ಸಾವಯವ ಪದಾರ್ಥಗಳಲ್ಲಿ ಕಂಡುಬರುವ ವಿಕಿರಣಕ್ರಿಯೆಯನ್ನು ಅಳೆದು ಕಾಲನಿರ್ಣಯಮಾಡುವ ಒಂದು ವಿಧಾನ. ಇದರ ನೆರವಿನಿಂದ ಪ್ರಾಕ್ತನ ಶಾಸ್ತ್ರಜ್ಞರು ಬೇರೆ ವಿಧಾನಗಳಿಂದ ಕಾಲ ನಿರ್ಧಾರ ಮಾಡಲಾಗಿದ್ದ ಅವಶೇಷಗಳ ಕಾಲವನ್ನು ಪರೀಕ್ಷಿಸಿ, ಅದರ ಉಪಯುಕ್ತತೆಯನ್ನು ದೃಢಪಡಿಸಿಕೊಂಡರು. ಅನಂತರ ವಾದಗ್ರಸ್ತವಾಗಿದ್ದ ಹಲವಾರು ಅವಶೇಷಗಳ ಸಂಸ್ಕøತಿಗಳ ಕಾಲನಿರ್ಣಯಕ್ಕೆ ಈ ವಿಧಾನವನ್ನು ಬಳಸಲಾಯಿತು. ಫ್ರಾನ್ಸಿನ ಲಾಸ್ಕೋ ಗುಹೆಗಳಲ್ಲಿ ಅಂತ್ಯಶಿಲಾಯುಗ ಸಂಸ್ಕøತಿಗಳ ಮಾನವ ನಿರ್ಮಿಸಿದ್ದ ವರ್ಣಚಿತ್ರಗಳ ಕಾಲದ ವಿಷಯವಾಗಿ ಬಹಳಷ್ಟು ಭಿನ್ನಭಿಪ್ರಾಯಗಳಿದ್ದುವು. ಆ ಗುಹೆಗಳಲ್ಲಿ ವರ್ಣಚಿತ್ರಗಳೊಂದಿಗೆ ದೊರಕಿದ ಇದ್ದಲು ತುಂಡುಗಳನ್ನು ಈ ವಿಧಾನದಿಂದ ಪರೀಕ್ಷಿಸಿ ಲಿಬ್ಬಿ ಆ ವರ್ಣಚಿತ್ರಗಳ ಕಾಲ ಸು. 15,516 ವರ್ಷಗಳೆಂದು ನಿರ್ಧರಿಸಿದ. ಭಾರತದ ಹರಪ್ಪಾ ನಾಗರಿಕತೆ, ನವಶಿಲಾಯುಗದ ಸಂಸ್ಕøತಿಗಳ ಕಾಲವನ್ನು ಈ ವಿಧಾನದಿಂದ ನಿರ್ಧರಿಸಲಾಗಿದೆ. ಕಾರ್ಬನ್-14 ವಿಧಾನದ ರೀತ್ಯಾ ಪಂಜಾಬ್, ಸಿಂಧ್ ಪ್ರಾಂತಗಳಲ್ಲಿ ಹರಪ್ಪಾ, ನಾಗರಿಕತ ಕ್ರಿ.ಪೂ. 2300ರಿಂದ 1700ರ ವರೆಗೆ ನೆಲೆಸಿದ್ದರೆ ನವಶಿಲಾಯುಗ ಸಂಸ್ಕøತಿಗಳು ಕಾಶ್ಮೀರ ಪ್ರದೇಶದಲ್ಲಿ ಕ್ರಿ. ಪೂ. 2400ರಿಂದ 1200ರ ವರೆಗೂ ದಕ್ಷಿಣ ಭಾರತದಲ್ಲಿ ಕ್ರಿ. ಪೂ. 2300ರಿಂದ 1000ರ ವರೆಗೂ ಇದ್ದುವೆಂದು ತಿಳಿದುಬರುತ್ತದೆ. ಭಾರತದ ಇತರ ಪ್ರಾಗ್ಚಾರಿತ್ರಿಕ ಸಂಸ್ಕøತಿಗಳಿಗೂ ಈ ವಿಧಾನದ ರೀತ್ಯಾ ಕಾಲನಿರ್ಧಾದ ಮಾಡಲಾಗಿದೆ.

 ಕಾರ್ಬನ್-14 ಕಾಲನಿರ್ಣಯ ವಿಧಾನದಲ್ಲಿ ಕೆಲವು ಕುಂದು ಕೊರತೆಗಳೂ ಇವೆ. ಪ್ರಯೋಗ ಶಾಲೆಯಲ್ಲಿ ಪ್ರಾಕ್ತನ ಸಾವಯವ ವಸ್ತುಗಳಲ್ಲಿನ ಕಾರ್ಬನ್-14ರ ಪ್ರಮಾಣವನ್ನು ಅಳೆಯುತ್ತಿರುವಾಗ ಆಧುನಿಕ ಕಾಲದ ಕಾರ್ಬನ್ನಿನ ಪ್ರಭಾವ ಅದರ ಮೇಲೆ ಕಂಡುಬರುತ್ತದೆ. ಇದನ್ನು ತಡೆಯಲು ವಿಜ್ಞಾನಿಗಳು ಈ ಯಂತ್ರದ ಸುತ್ತ ಉಕ್ಕಿನ ರಕ್ಷಣಾ ಕವಚವನ್ನು ಒದಗಿಸುತ್ತಾರೆ. ಈಚೆಗೆ ಇತರ ಕ್ರಮಗಳನ್ನೂ ಕೈಗೊಳ್ಳುತ್ತಿರುವುದಾಗಿ ತಿಳಿದುಬಂದಿವೆ. ಎಲ್ಲ ರೀತಿಯ ವಸ್ತುಗಳಲ್ಲೂ ಕಾರ್ಬನ್-14 ಒಂದೇ ಪ್ರಮಾಣದಲ್ಲಿರುತ್ತದೆಯೇ ಎಂಬ ಸಮಸ್ಯೆ ಈಚೆಗೆ ವಿಜ್ಞಾನಿಗಳಲ್ಲಿ ಎದ್ದಿದೆ. ಲಿಬ್ಬಿ ಇದು ಒಂದೇ ಪ್ರಮಾಣದಲ್ಲಿದೆ ಎಂದು ಒಪ್ಪಿಕೊಂಡಿದ್ದರೂ ಈಚೆಗೆ ಮಿನಿಸೋಟ ವಿಶ್ವವಿದ್ಯಾಲಯದ ಎ.ಒ. ನೈಯರ್ ಇದು ಸರಿಯಲ್ಲವೆಂದು ತೋರಿಸಿದ್ದಾನೆ. ಕಾರ್ಬನ್-14 ಕಪ್ಪೆಚಿಪ್ಪು, ಶಂಖ ಮುಂತಾದ ಪದಾರ್ಥಗಳಲ್ಲಿ ಮರದಲ್ಲಿರುವುದಕ್ಕಿಂತ ಹೆಚ್ಚಾಗಿರುತ್ತದೆಂದೂ ಹೇಳಲಾಗಿದೆ. ಪ್ರಾಕ್ತನ ಸಾವಯವ ಪದಾರ್ಥಗಳು ಭೂ ಪದರಗಳಲ್ಲಿದ್ದಾಗ ಮಣ್ಣಿನಲ್ಲಿರುವ ಆಮ್ಲಗಳು (ಹ್ಯೂಮಿಕ್ ಆಸಿಡ್ಸ್) ಅವುಗಳೊಂದಿಗೆ ಸೇರುವ ಸಾಧ್ಯತೆಯಿದೆ. ಆದ್ದರಿಂದ ಈಚಿನ ಕಾರ್ಬನ್ ಪ್ರಾಕ್ತನ ವಸ್ತುಗಳಲ್ಲಿನ ಕಾರ್ಬನ್ನಿನೊಂದಿಗೆ ಬೆರೆತುಹೋಗಿ ಕಾಲನಿರ್ಣಯದಲ್ಲಿ ಏರುಪೇರಾಗುತ್ತದೆ. ವಿಜ್ಞಾನಿಗಳು ಈ ಸಾಧ್ಯತೆಯ ವಿರುದ್ಧವೂ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಯೋಗಶಾಲೆಗೆ ಪ್ರಾಕ್ತನ ಸಾವಯವ ವಸ್ತುಗಳನ್ನು ಕಳಿಸುವಾಗ ಸೂಕ್ತ ಜಾಗ್ರತೆ ವಹಿಸದಿದ್ದರೆ ಕಾಲನಿರ್ಣಯ ಮಾಡಲು ಸಾಧ್ಯವಿಲ್ಲ. ಈಗಿನ ವಾತಾವರಣದಲ್ಲಿರುವ ಕಾರ್ಬನ್ ಪ್ರಾಕ್ತನ ವಸ್ತುಗಳೊಂದಿಗೆ ಸೇರದಂತೆ ಕ್ರಮ ಕೈಗೊಳ್ಳಬೇಕು.

 ಈ ಹಲವು ಅಡಚಣೆಗಳನ್ನು ಹೋಗಲಾಡಿಸಿ, ಪ್ರಯೋಗ ವಿಧಾನಗಳನ್ನು ಉತ್ತಮಗೊಳಿಸಲು ವಿಜ್ಞಾನಿಗಳು ಇನ್ನೂ ಶ್ರಮಿಸುತ್ತಿದ್ದಾರೆ. ಈ ದಿಶೆಯಲ್ಲಿ ಜೆ. ವಿ. ಪಿ. ಲಾಂಗ್ ಎಂಬಾತನ ಪ್ರಯತ್ನ ಗಮನಾರ್ಹ. ಪ್ರಾಕ್ತನಶಾಸ್ತ್ರದಲ್ಲಿ ಬಳಕೆಯಲ್ಲಿರುವ ಕಾಲನಿರ್ಣಯ ಪದ್ಧತಿಗಳಲ್ಲಿ ಕಾರ್ಬನ್-14 ಕಾಲನಿರ್ಣಯ ವಿಧಾನ ಅತ್ಯಂತ ಪ್ರಯೋಜನಕಾರಿ.  

(ನೋಡಿ- ಕಾಲನಿರ್ಣಯ-ವಿಧಾನಗಳು)          

                                               (ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ